ಬರ್ನೆಲ್, ಆರ್ಥರ್ ಕೋಕ್
1840-82. ಇಂಗ್ಲೆಂಡಿನ ಪ್ರಖ್ಯಾತ ಸಂಸ್ಕøತ ವಿದ್ವಾಂಸ. ದಕ್ಷಿಣ ಭಾರತೀಯ ಭಾಷೆ ಸಾಹಿತ್ಯಗಳ ಬಗ್ಗೆ ಅಧಿಕಾರವಾಣಿಯಿಂದ ನುಡಿಯಬಲ್ಲವನಾಗಿದ್ದವ. ಹುಟ್ಟಿದ್ದು ಗ್ಲೌಸ್ಟರ್‍ಷೈರಿನ ಸೇಂಟ್ ಬ್ರಿಯಾವೆಲ್ಸ್‍ನಲ್ಲಿ. ತಂದೆ ಆರ್ಥರ್ ಬರ್ನೆಲ್ ಈಸ್ಟ್ ಇಂಡಿಯ ಕಂಪನಿಯಲ್ಲಿ ಒಬ್ಬ ನೌಕರನಾಗಿದ್ದ. ತಾತ ಸರ್ ಡಬ್ಲ್ಯು ಕೋಕ್ ಸಿಂಹಳದಲ್ಲಿ (ಈಗಿನ ಶ್ರೀಲಂಕಾ) ಮುಖ್ಯ ನ್ಯಾಯಾಧೀಶನಾಗಿದ್ದ. ಈತ ಬೆಡ್‍ಫರ್ಡ್ ಮತ್ತು ಕಿಂಗ್ಸ್ ಕಾಲೇಜುಗಳಲ್ಲಿ ವ್ಯಾಸಂಗ ಮುಗಿಸಿ ಕೋಪನ್‍ಹೇಗನ್ನಿನ ಪ್ರಾಧ್ಯಾಪಕ ಫಾಸ್‍ಬಾಲನ ಉತ್ತೇಜನದಿಂದ ಭಾರತದ ಇತಿಹಾಸ ಮತ್ತು ಭಾಷೆಗಳತ್ತ ಗಮನ ಹರಿಸಿದ. ಜಾರ್ಜ್ ಬರೋನಿಂದ ಇವನಿಗೆ ಇನ್ನಷ್ಟು ಪ್ರೋತ್ಸಾಹ ದೊರಕಿತು. 1857ರಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಬರ್ನೆಲ್ ಉತ್ತೀರ್ಣನಾದ. ಗೋಲ್ಡ್ ಸ್ಟಕರ್ ಎಂಬಾತನಿಂದ ಸಂಸ್ಕøತ ಮತ್ತು ತೆಲುಗು ಭಾಷೆಗಳನ್ನು ಕಲಿತ. 1860ರಲ್ಲಿ ಬರ್ನೆಲ್ ಮದರಾಸಿಗೆ ಬಂದು ಮಲಬಾರ್, ತಂಜಾವುರು, ಚೆಂಗಲ್‍ಪುರ್, ಕಡಪ ಹಾಗೂ ನೆಲ್ಲೂರು ಜಿಲ್ಲೆಗಳಲ್ಲಿ ಸಿವಿಲ್ ಆಡಳಿತ ಇಲಾಖೆಗಳಲ್ಲಿ ಕೆಲಸ ಮಾಡಿದ.

ಈ ಕಾಲದಲ್ಲಿ ಬರ್ನೆಲ್‍ನ ಅಧ್ಯಯನಾಸಕ್ತಿ ಬೆಳೆಯುತ್ತಲೇ ಇತ್ತು. ಈತ ಅವಕಾಶ ದೊರೆತಾಗಲೆಲ್ಲ ಸಂಸ್ಕøತ ಹಸ್ತಪ್ರತಿಗಳನ್ನು ಸಂಗ್ರಹಿಸುವ ಅಥವಾ ಪ್ರತಿ ಮಾಡಿಕೊಳ್ಳುವ ಕೆಲಸವನ್ನೂ ಮಾಡುತ್ತ ಬಂದ. ಹೀಗಾಗಿ ಇವನ ಬಳಿ ಸಂಸ್ಕøತ ಹಸ್ತಪ್ರತಿಗಳ ಅಮೂಲ್ಯ ಸಂಗ್ರಹವಿತ್ತು. 1868ರಲ್ಲಿ ಬರ್ನೆಲ್ ಅನಾರೋಗ್ಯದಿಂದಾಗಿ ರಜೆ ಪಡೆದು ಸ್ವದೇಶಕ್ಕೆ ಹಿಂದಿರುಗಬೇಕಾಯಿತು. ಈತ ಇಂಗ್ಲೆಂಡಿನಲ್ಲಿದ್ದಾಗ ಸಂಸ್ಕøತ ಹಸ್ತಪ್ರತಿಗಳ ಸಂಗ್ರಹದ ಸೂಚಿಯ ಪ್ರಥಮ ಭಾಗವನ್ನು (ವೇದಗಳಿಗೆ ಸಂಬಂಧಿಸಿದ ಹಸ್ತಪ್ರತಿಗಳು) ಪ್ರಕಟಿಸಿದ (1869). ಆ ವರೆಗೆ ಸಂಗ್ರಹಿಸಿದ್ದ ಸುಮಾರು 250 ಸಂಸ್ಕøತ ಗ್ರಂಥಗಳ ಹಸ್ತಪ್ರತಿಗಳನ್ನು ಇವನು ಇಂಡಿಯ ಲೈಬ್ರರಿಗೆ ನೀಡಿದ.

ಬರ್ನೆಲ್ ಭಾರತಕ್ಕೆ ಹಿಂದಿರುಗಿದ ಮೇಲೆ ಮಂಗಳೂರು ಮತ್ತು ತಂಜಾವುರುಗಳಲ್ಲಿ ನ್ಯಾಯಾಧೀಶನಾಗಿ ಸೇವೆ ಸಲ್ಲಿಸಿದ. ಈತ ಮದರಾಸ್ ಸರ್ಕಾರಕ್ಕಾಗಿ ಸಿದ್ಧಪಡಿಸಿದ ಕ್ಲಾಸಿಫೈಡ್ ಇಂಡೆಕ್ಸ್ ಟು ದಿ ಸ್ಯಾನ್ಸ್‍ಸ್ಕ್ರಿಟ್ ಮ್ಯಾನಸ್ಕ್ರಿಪ್ಟ್ಸ್ ಇನ್ ದಿ ಪ್ಯಾಲೇಸ್ ಆಟ್ ಟ್ಯಾಂಜೂರ್ 1880ರಲ್ಲಿ ಪ್ರಕಟವಾಯಿತು. ಅಪಾರವಾದ ಪರಿಶ್ರಮ ಮತ್ತು ಆಳವಾದ ಅಧ್ಯಯನಗಳಿಂದ ಸಿದ್ಧಪಡಿಸಲಾದ ಈ ಕೃತಿ ದಕ್ಷಿಣ ಭಾರತದ ಸಂಸ್ಕøತ ಸಾಹಿತ್ಯದ ಸ್ಥೂಲ ಪರಿಚಯ ಮಾಡಿಕೊಡುತ್ತದೆ. ಈತನ ಇನ್ನೊಂದು ಮಹತ್ತ್ವದ ಕೃತಿಯೆಂದರೆ 1874ರಲ್ಲಿ ಪ್ರಕಟವಾಗಿ 1878ರಲ್ಲಿ ಮರುಮುದ್ರಣ ಕಂಡ ಎ ಹ್ಯಾಂಡ್‍ಬುಕ್ ಆಫ್ ಸೌತ್ ಇಂಡಿಯನ್ ಪೇಲಿಯೋಗ್ರಫಿ. ಉತ್ತರ ಭಾರತದ ಲಿಪಿಶಾಸ್ತ್ರ ಕ್ಷೇತ್ರದಲ್ಲಿ ಸುಮಾರು ನಾಲ್ಕು ದಶಕಗಳ ಹಿಂದೆ ಪ್ರಿನ್ಸೆಪ್ ಮಾಡಿದಂಥದೇ ಕೆಲಸವನ್ನು ಇವನು ದಕ್ಷಿಣ ಭಾರತದ ಲಿಪಿಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಾಡಿದನೆಂದು ಹೇಳಬಹುದು. ಈ ಮೇರುಕೃತಿಯಿಂದಾಗಿ ಬರ್ನೆಲ್ಲನಿಗೆ ಸ್ಟ್ಯಾಸ್‍ಬರ್ಗ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ದೊರಕಿತು.

ಬರ್ನೆಲ್ಲನ ಇತರ ಕೃತಿಗಳ ಪೈಕಿ ಹೆಚ್ಚಿನವು ಮಂಗಳೂರಿನಲ್ಲಿ ಮುದ್ರಿತವಾದವು. ಎ ಟ್ರಾನ್ಸ್‍ಲೇಷನ್ ಆಫ್ ದಿ ಸೆಕ್ಷತ್ ಆಫ್ ಇನ್‍ಹೆರಿಟೆನ್ಸ್ ಫ್ರಮ್ ದಿ ಮಾಧವಾಸ್ ಕಾಮೆಂಟರಿ ಆನ್ ದಿ ಪರಾಶರ ಸ್ಮøತಿ (1868), ದಿ ಲಾ ಆಫ್ ಪಾರ್ಟಿಷನ್ ಅಂಡ್ ಸಕ್ಸೆಷನ್ ಫ್ರಮ್ ದಿ ಮ್ಯಾನಸ್ಕ್ರಿಪ್ಟ್ ಸ್ಯಾನ್ಸ್‍ಸ್ಕ್ರಿಟ್ ಆಫ್ ವರದರಾಜಾಸ್ ವ್ಯವಹಾರ ನಿರ್ಣಯ ಮತ್ತು ದಿ ಟೆಕ್ಸ್ಟ್ ಅಂಡ್ ಟ್ರಾನ್ಸ್‍ಲೇಷನ್ ಆಫ್ ಎ ಬ್ರೀಫ್ ಸಮ್ಮರಿ ಆಫ್ ಹಿಂದು ಲಾ ಆಫ್ ಇನ್‍ಹೆರಿಟೆನ್ಸ್ ಅಂಡ್ ಪಾರ್ಟಿಷನ್ (1875)-ಇವು ಕೆಲವು ಕೃತಿಗಳು. ಈ ಕೊನೆಯ ಕೃತಿಯ ಮುನ್ನುಡಿಯಲ್ಲಿ ಬರ್ನೆಲ್ ಹಿಂದೂ ಧರ್ಮಶಾಸ್ತ್ರಗಳ ಬಗ್ಗೆ ಇದ್ದ ಸಮಕಾಲೀನ ಇಂಗ್ಲಿಷ್ ಕೈಪಿಡಿಗಳ ಪಕ್ಷಪಾತದ ನಿರೂಪಣೆಯನ್ನು ಕಟ್ಟುವಾಗಿ ಖಂಡಿಸಿದ್ದಾನೆ.

1873-78ರಲ್ಲಿ ಬರ್ನೆಲ್ ಐದು ಸಾಮವೇದ ಬ್ರಾಹ್ಮಣಗಳನ್ನು ಪ್ರಕಟಿಸಿದ. ಇವುಗಳಿಗೆ ಭಾಷಾಂತರವಿಲ್ಲದಿದ್ದರೂ ಸಾಯಣನ ಟೀಕೆ, ಪದಸೂಚಿ ಮತ್ತು ವಿಶದವಾದ ಪೀಠಿಕೆಗಳಿವೆ. ವಂಶಬ್ರಾಹ್ಮಣದ ಪೀಠಿಕೆಯಲ್ಲಿ ಸಾಯಣನ ಸಾಹಿತ್ಯಕ್ಕೆ ಜೀವನವನ್ನು ಕುರಿತ ವಿವರಗಳಿವೆ. 1879ರಲ್ಲಿ ಸಾಮವೇದ ಪ್ರಾತಿಶಾಖ್ಯಗಳಲ್ಲೊಂದನ್ನು ಪ್ರಕಟಿಸಿದ. 1878ರಲ್ಲಿ ದಂತಕಥೆಗಳ ಆಗರವಾದ ಹಾಗೂ ಬ್ರಾಹ್ಮಣಗಳಲ್ಲೊಂದಾದ ತಲವಕಾರದ ಉದ್ಧರಣಗಳನ್ನು ಪ್ರಕಟಿಸಿದ; ಇದಕ್ಕೆ ಭಾಷಾಂತರವೂ ಇದೆ. ಈ ಕಾಲದಲ್ಲಿ ಪ್ರಕಟಿಸಿದ ಕೆಲವು ಪುಸ್ತಿಕೆಗಳಲ್ಲಿ ಸ್ಪೆಸಿಮೆನ್ಸ್ ಆಫ್ ಸೌತ್ ಇಂಡಿಯನ್ ಡಯಲೆಕ್ಟ್ಸ್ ಮತ್ತು ದಿ ಐಂದ್ರ ಸ್ಕೂಲ್ ಆಫ್ ಸ್ಯಾನ್ಸ್‍ಕ್ರಿಟ್ ಗ್ರಮೇರಿಯನ್ಸ್ ಎಂಬುವು ಸೇರಿವೆ. ಇತರ ಕೆಲವು ಲೇಖನಗಳು ಇಂಡಿಯನ್ ಆ್ಯಂಟಿಕ್ವೆರಿಯ ಸಂಪುಟಗಳಲ್ಲಿ ಪ್ರಕಟವಾಗಿವೆ.
ಬಾಲ್ಯದಿಂದಲೂ ಬರ್ನೆಲ್ಲನ ಆರೋಗ್ಯ ಅಷ್ಟೇನೂ ಚಿನ್ನಾಗಿರಲಿಲ್ಲ. ಅಧ್ಯಯನ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಹಲವು ಅತಿಯಾದ ಶ್ರಮದಿಂದಾಗಿ ಇವನ ದೇಹ ಸೋತಿತ್ತು. 1880ರಲ್ಲಿ ಬರ್ನೆಲ್ ಯೂರೋಪಿಗೆ ಹಿಂದಿರುಗುವ ಮೊದಲೇ ಕಾಲರಾದಿಂದಲೂ ಪಾಶ್ರ್ಚವಾಯುವಿನಿಂದಲೂ ದುರ್ಬಲಗೊಂಡಿದ್ದ. ಬರ್ನೆಲ್ ಭಾರತಕ್ಕೆ ಹಿಂದಿರುಗುವುದು ಸಾಧ್ಯವಿಲ್ಲವೆಂಬುದನ್ನು ಇವನ ಸ್ನೇಹಿತರು ಅರಿತಿದ್ದರೂ ಈತ ಆರಂಭಿಸಿದ ಕೆಲವು ಕೆಲಸಗಳನ್ನು ಪೂರೈಸಬಹುದೆಂದು ಭಾವಿಸಿದ್ದರು. ಎರಡು ಚಳಿಗಾಲಗಳನ್ನು ಇಟಲಿಯ ಸ್ಯಾನ್ ರೆಮೋ ಎಂಬಲ್ಲಿ ಕಳೆದು 1882ರ ಬೇಸಗೆಯ ಆರಂಭದಲ್ಲಿ ಬರ್ನೆಲ್ ಬ್ರಿಟನ್ನಿಗೆ ಹಿಂದಿರುಗಿದ. ಹ್ಯಾಂಪ್‍ಷ್ಟೆರಿನ ವೆಸ್ಟ್ ಸ್ಟ್ರ್ಯಾಟನ್‍ನಲ್ಲಿ ಈತ ಸೋದರನ ಮನೆಯಲ್ಲಿ ಅಕ್ಟೋಬರ್ 12ರಂದು ಮರಣ ಹೊಂದಿದ.
ಬರ್ನೆಲ್ ಪೂರ್ಣಗೊಳಿಸಲಾಗದ ಎರಡು ಕೃತಿಗಳು ಅನಂತರ ಪ್ರಕಟವಾದುವು.

1. ಎ ಟ್ರಾನ್ಸ್‍ಲೇಷನ್ ಆಫ್ ದಿ ಅರ್ಡಿನೆನ್ಸ್‍ಸ್ ಆಫ್ ಮನು ಎಂಬುದನ್ನು ಅಮೆರಿಕದ ಇ ಡಬ್ಲ್ಯು ಹಾಪ್‍ಕಿನ್ಸ್ ಪೂರ್ಣಗೊಳಿಸಿದ (1885). 2. ಲಿನ್ ಷೋಟಿನ್ನನ ಈಸ್ಟ್ ಇಂಡೀಸ್ ಕೃತಿಯ ಇಂಗ್ಲಿಷ್ ಭಾಷಾಂತರವನ್ನು ಪಿ.ಎ.ಟೈಲ್ ಪೂರ್ಣಗೊಳಿಸಿದ (1885).

ತನ್ನ ಜೀವನದ ಕೊನೆಯ ದಿನಗಳಲ್ಲಿ ಬರ್ನೆಲ್ ಪೋರ್ಚುಗೀಸ್ ಇತಿಹಾಸ ಸಾಹಿತ್ಯಗಳಲ್ಲಿ ವಿಶೇಷ ಆಸಕ್ತಿ ತಳೆದಿದ್ದ. ಈ ಬಗ್ಗೆ ಅನೇಕ ಅಮೂಲ್ಯವಾದ ಗ್ರಂಥಗಳನ್ನು ಸಂಗ್ರಹಿಸಿದ್ದ. 1880ರಲ್ಲಿ ಇವನ್ನು ಕುರಿತ ಒಂದು ಸೂಚಿಯನ್ನು ಪ್ರಕಟಿಸಿದ್ದ.

ಬರ್ನೆಲ್ಲನಿಗೆ ಸಂಸ್ಕøತ ಹಾಗೂ ತೆಲುಗು, ದಕ್ಷಿಣ ಭಾರತದ ಇತಿಹಾಸ ಭಾಷೆ ಮತ್ತು ಲಿಪಿಗಳು ಇವುಗಳಲ್ಲಿ ಅಪಾರವಾದ ಪಾಂಡಿತ್ಯವಿತ್ತು. ಟಿಬೆಟನ್, ಅರಾಬಿಕ್, ಕುವೈ, ಜಾವಾ, ಕಾಪ್ಟಿಕ್ ಮತ್ತು ಪಾಲಿ ಭಾಷೆಗಳ ಪರಿಚಯವೂ ಸ್ವಲ್ಪಮಟ್ಟಿಗೆ ಇತ್ತು.

ಬರ್ನೆಲ್ ತನ್ನ ಹಸ್ತಪ್ರತಿಗಳ ಸಂಗ್ರಹವನ್ನು 1870ರಲ್ಲಿ ಇಂಡಿಯಾ ಲೈಬ್ರರಿಗೆ ಕೊಡುಗೆಯಾಗಿ ನೀಡಿದ್ದ. ಭಾರತಕ್ಕೆ ಬಂದ ಮೇಲೆ ತನ್ನ ಸಂಗ್ರಹ ಕಾರ್ಯವನ್ನು ಮತ್ತೆ ಆರಂಭಿಸಿ ಸುಮಾರು 350 ಹಸ್ತ ಪ್ರತಿಗಳನ್ನು ಸಂಗ್ರಹಿಸಿದ್ದ, ಇವನ್ನು ಆತನ ವಂಶಜರಿಂದ ಇದೇ ಗ್ರಂಥಾಲಯ ಕೊಂಡುಕೊಂಡಿತು.
(ಎಚ್.ಎಮ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ